ಈ ಬ್ಲಾಗ್ ಏಕೆ?
ಕಳೆದ ಸುಮಾರು 25 ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ನಾನು, ಪತ್ರಿಕೆಯಲ್ಲಿ ಬರೆದಾಗಲೆಲ್ಲಾ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ ಹೇಳುವುದಾದರೆ, ನಾನು ಬರೆಯುತ್ತಿರುವುದು ಸರಿ ದಾರಿಯಲ್ಲಿದೆ ಅನಿಸುತ್ತಿತ್ತು. ನನ್ನ ಈ ಬ್ಲಾಗ್‌ನಲ್ಲಿರುವ ಎಲ್ಲ ಬರಹಗಳೂ ಒಂದಲ್ಲಾ ಒಂದು ಪತ್ರಿಕೆಯಲ್ಲಿ ಪ್ರಕಟಗೊಂಡಿರುವಂಥವು. ನಾನು ಕಳೆದ 20 ವರ್ಷಗಳಿಂದ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ್ದರಿಂದ ಸಹಜವಾಗಿ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಹೆಚ್ಚು ಲೇಖನಗಳು ಇಲ್ಲಿವೆ.
ನಾಟಕ, ಕಥೆ, ಕವನ, ಪ್ರಬಂಧ, ಲಲಿತಪ್ರಬಂಧಗಳನ್ನು ಬರೆದು ಕೆಲವನ್ನು ಪ್ರಕಟಿಸಿರುವೆನಾದರೂ, ಈ ಬ್ಲಾಗನ್ನು ಆದಷ್ಟೂ ಸಾಹಿತ್ಯಿಕ ಬರವಣಿಗೆಗಳಿಂದ ದೂರವಿಡೋಣ ಎಂದುಕೊಂಡಿದ್ದೇನೆ.
ಅದೆಲ್ಲ ಏನೇ ಇರಲಿ, ನಾನು ಪ್ರತಿ ಬಾರಿ ಹೊಸದಾಗಿ ಏನನ್ನಾದರೂ ಬರೆದಾಗಲೂ ನಿಮ್ಮ ಹಳೆಯ ಲೇಖನಗಳಿದ್ದರೆ ಕಳಿಸಿ ಓದುತ್ತೇವೆ ಎಂದು ಒಬ್ಬರಲ್ಲ ಒಬ್ಬರು ಕೇಳುತ್ತಲೇ ಇರುತ್ತಾರೆ. ಅದೆಲ್ಲ ತ್ರಾಸದಾಯಕ ಕೆಲಸವಾಗಿರುವುದರಿಂದ ನನ್ನ ಗೆಳೆಯರಿಗೆ ನನ್ನ ಸಾಹಿತ್ಯೇತರ ಬರಹಗಳಾದರೂ ಒಟ್ಟಿಗೆ ಸಿಗಲಿ ಎಂಬ ಉದ್ದೇಶ ಮತ್ತು ಇನ್ನೊಮ್ಮೆ ಎಲ್ಲರಿಗೂ ಕೊರೆಯುವ ಅವಕಾಶ ಸಿಗುತ್ತದಲ್ಲ ಎಂಬ ಸ್ವಾರ್ಥ ಮಾತ್ರ ಇದ್ದೇ ಇದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ